ರೋ, ಥಾಮಸ್ -
ಮೊಗಲರ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗ. ಗ್ರೇಟ್ ಬ್ರಿಟನ್ನಿನ ದೊರೆ ಒಂದನೆಯ ಜೇಮ್ಸ್ 1615ರಲ್ಲಿ ಮೊಗಲ್ ಚಕ್ರವರ್ತಿ ಜಹಾಂಗೀರನೊಡನೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಒಂದು ಒಪ್ಪಂದವನ್ನು ಮಾಡಿಕೊಳ್ಳಲು ಇವನನ್ನು ಕಳುಹಿಸಿಕೊಟ್ಟ. ಈತ 1615ರಲ್ಲಿ ಸೂರತ್ ತಲುಪಿ, ಅನಂತರ ಅದೇ ವರ್ಷದ ಅಂತ್ಯದ ವೇಳೆಗೆ ಜಹಾಂಗೀ ರನ ಆಸ್ಥಾವನ್ನು ತಲುಪಿದ. ಜಹಾಂಗೀರನ ಆಸ್ಥಾನದಲ್ಲಿ 1615ರಿಂದ 1618ರ ವರೆಗೆ ಇದ್ದ. ಪೋರ್ಚುಗೀಸರ ಕುತಂತ್ರಗಳಿಂದಾಗಿ ಬ್ರಿಟಿಷ್ ವ್ಯಾಪಾರಿಗಳು ಮೊಗಲ್ ಸಾಮ್ರಾಜ್ಯದಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯಾದ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಈ ದಿಶೆಯಲ್ಲಿ ಈತ ಯಶಸ್ವಿಯಾದ. ಈಸ್ಟ್ ಇಂಡಿಯ ಕಂಪನಿ ವ್ಯಾಪಾರಕ್ಕೆ ಅಸ್ತಿಭಾರ ಹಾಕಿದ. ಜಹಾಂಗೀರನಿಂದ ಒಂದು ಫರ್ಮಾನನ್ನು ಪಡೆದು ಬ್ರಿಟಿಷ್ ವ್ಯಾಪಾರಿಗಳು ಸೂರತ್‍ನಲ್ಲಿ ವ್ಯಾಪಾರ ಮಾಡುವ ಹಕ್ಕನ್ನು ಗಳಿಸಿಕೊಟ್ಟ. ಈತ ಬರೆದ ಜರ್ನಲ್ ಎಂಬ ಗ್ರಂಥದಿಂದ ಜಹಾಂಗೀರನ ಆಸ್ಥಾನದ ಬಗ್ಗೆ ಅನೇಕ ವಿವರಗಳು ದೊರಕುತ್ತವೆ. ಈ ಕೃತಿಯಲ್ಲಿ ಸಾಮ್ರಾಜ್ಯದ ಪರಿಸ್ಥಿತಿಗಳ ಬಗ್ಗೆ, ಆಸ್ಥಾನದ ರಾಜಕೀಯ ಕುತಂತ್ರಗಳ ಬಗ್ಗೆ ಹಾಗೂ ಪ್ರಮುಖ ವ್ಯಕ್ತಿಗಳ ಬಗ್ಗೆ ವಿವರಣೆ ನೀಡಿದ್ದಾನೆ. ಮೊಗಲರ ಆಸ್ಥಾನದ ಅತ್ಯಂತ ವೈಭವದ ಬಗ್ಗೆ, ಶ್ರೀಮಂತರ ಸಂತೋಷ ಕೂಟಗಳ ಬಗ್ಗೆ, ರೈತರ ದುಸ್ಥಿತಿಗಳ ಬಗ್ಗೆ, ಹೆದ್ದಾರಿಗಳು ಪ್ರಯಾಣಕ್ಕೆ ಹೆಚ್ಚು ಸುರಕ್ಷಿತವಾಗಿಲ್ಲದಿರುವುದರ ಬಗ್ಗೆ, ಸ್ಥಳೀಯ ಆಡಳಿತದ ಅಸಮರ್ಪಕತೆ ಮತ್ತು ಲಂಚರುಷುವತ್ತುಗಳ ಬಗ್ಗೆ ಇದರಲ್ಲಿ ಅನೇಕ ವಿವರಗಳಿವೆ. ಎಸ್ಟೇಟ್ ಕಾನೂನಿನ ಬಗ್ಗೆಯೂ ಈತ ವಿವರಣೆ ನೀಡಿದ್ದಾನೆ. ಈ ಕಾನೂನಿನ ಪ್ರಕಾರ ಶ್ರೀಮಂತರ ಮರಣಾನಂತರ ಅವರ ಸಂಪತ್ತನ್ನು ಚಕ್ರವರ್ತಿ ವಶಪಡಿಸಿಕೊಳ್ಳುತ್ತಿದ್ದ. ಜಹಾಂಗೀರ್ ಗರ್ವದಿಂದ ಕೂಡಿದ ವ್ಯಕ್ತಿಯಾಗಿರಲಿಲ್ಲವೆಂದೂ ರಾತ್ರಿ ಸಮಯದಲ್ಲಿ ಮದ್ಯಪಾನ ವಿಲಾಸಿಯಾಗಿರುತ್ತಿದ್ದನೆಂದೂ ಹೇಳಿದ್ದಾನೆ. ಬಂದರುಗಳಲ್ಲಿ ವ್ಯಾಪಾರಿಗಳು ತೊಂದರೆಗೊಳಗಾಗುತ್ತಿದ್ದರೆಂದೂ ಈ ಕಾಲದಲ್ಲಿ ದಖನ್ ಪ್ರದೇಶ ದುಸ್ಥಿತಿಯಲ್ಲಿತ್ತೆಂದೂ ವಿವರಿಸಿದ್ದಾನೆ.	
(ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ